ಕೀಲ್‍ಹಾರ್ನ್, ಫ್ರಾಂಜ್

  1840-1908. ಕನ್ನಡ ನಾಡಿನ ಪ್ರಾಚೀನ ಶಾಸನಗಳನ್ನು ಶಾಸ್ತ್ರೀಯವಾಗಿ ಅಭ್ಯಸಿಸಿ ಪರಿಷ್ಕರಿಸಿ ವಿದ್ವತ್ಪೂರ್ಣ ಉಪೋದ್ಘಾತ ಟಿಪ್ಪಣಿಗಳೊಂದಿಗೆ ಪ್ರಕಟಿಸಿದ ವಿದ್ವಾಂಸ. ಪಶ್ಚಿಮ ಜರ್ಮನಿಯ ಆಸ್ನ್‍ಬ್ರೂಕ್‍ನಲ್ಲಿ ಹುಟ್ಟಿದ.

 ಈತ ಜರ್ಮನಿಯ ಗೊಟ್ಟಿಂಜೆನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಇಂಗ್ಲೆಂಡಿನಲ್ಲಿದ್ದು ಅಲ್ಲಿಂದ ಭಾರತಕ್ಕೆ ಬಂದು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪೌರಸ್ತ್ಯ ಭಾಷೆಗಳ ಪ್ರಾಧ್ಯಾಪಕನಾದ. 1861ರಲ್ಲಿ ಡಾಕ್ಟೊರೇಟ್ ಪದವಿ ಪಡೆದಾಗ ಈತನಿಗೆ ಕೇವಲ 21 ವರ್ಷ. ಈತ ಜರ್ಮನಿಯಲ್ಲಿದ್ದಾಗ ಮ್ಯಾಕ್ಸ್‍ಮುಲ್ಲರ್ ಸಾಯಣರ ಟೀಕೆಯೊಂದಿಗೆ ಋಗ್ವೇದವನ್ನು ಸಂಪಾದಿಸುತ್ತಿದ್ದ. ಆತನಿಗೂ ಸಂಸ್ಕ್ರತ-ಇಂಗ್ಲಿಷ್ ಶಬ್ದಕೋಶದ ರಚನಾಕಾರ್ಯದಲ್ಲಿ ತೊಡಗಿದ ಮಾನಿಯರ್ ವಿಲಿಯಮ್ಸರಿಗೂ ಈತ ನೆರವಾದ (1862-1865), ಒಳ್ಳೆಯ ಮೇಧಾವಿ, ಸಂಸ್ಕ್ರತ ಪಂಡಿತ, ನುರಿತ ಸಂಶೋಧನಕನಾದ ಈತ ಪುಣೆಯ ಪೇಷ್ವೆಯವರ ಸಂಸ್ಕøತ ಹಸ್ತಲಿಖಿತ ಭಾಂಡಾಗಾರದ ಮೂಲಕ ಸಂಸ್ಕøತ, ಪಾಕೃತ ಮತ್ತು ಪಾಲಿ ಭಾಷೆಗಳಲ್ಲಿ ಸಂಶೋಧನೆಗಳನ್ನು ನಡೆಸಿದ. ವ್ಯಾಕರಣದಲ್ಲಿ ಈತನಿಗೆ ಉತ್ಕಟ ಅಭಿರುಚಿ, ಭಾರತೀಯ ಪಂಡಿತರಿಂದ ಸಂಸ್ಕøತ ವ್ಯಾಕರಣದ ಜಾಡನ್ನು ತಿಳಿದ ಈತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಒಂದು ಸಂಸ್ಕøತ ವ್ಯಾಕರಣವನ್ನೂ ಪರದೇಶದ ಸಂಸ್ಕøತಾಭ್ಯಾಸಿಗಳಿಗೆ ಉಪಯೋಗವಾಗುವಂತೆ ಪಾಣಿನೀಸೂತ್ರ, ಕಾತ್ಯಾಯನವೃತ್ತಿ, ಪತಂಜಲಿ ಮಾಹಾಭಾಷ್ಯ, ಭಟ್ಟೋಜಿ ದೀಕ್ಷಿತರ ಕೌಮುದಿ ಗ್ರಂಥಗಳ ಆಧಾರಗಳನ್ನು ಕೊಟ್ಟು ಶಾಸ್ತ್ರಬದ್ಧವಾದ ರೀತಿಯಲ್ಲಿ ಇಂಗ್ಲಿಷಿನಲ್ಲಿ ಬೇರೊಂದು ವ್ಯಾಕರಣ ಗ್ರಂಥ-ಇಷ್ಟನ್ನೂ ಬರೆದ. ಪತಂಜಲಿಯ ಮಹಾಭಾಷ್ಯವನ್ನು ಅನೇಕ ಹಸ್ತಪ್ರತಿಗಳ ಆಧಾರದಿಂದ ಪರಿಷ್ಕರಿಸಿ ಪ್ರಕಟಿಸಿದ. ಈತನ ಮತ್ತೊಂದು ಉದ್ಗ್ರಂಥವೆಂದರೆ ನಾಗೋಜಿ ಭಟ್ಟನ ಪರಿಭಾಷೇಂದು ಶೇಖರದ ಮೇಲೆ ರಚಿಸಿದ ಕೃತಿ. ಮೊದಲಿಗೆ ಬ್ಯೂಲರ್ ಸಂಪಾದಕನಾಗಿದ್ದು ಮೃತನಾದ ಅನಂತರ ಈತ ಇಂಡೊ-ಆರ್ಯನ್ ಸಂಶೋಧನೆಯ ವಿಶ್ವಕೋಶಕ್ಕೆ ಸಂಪಾದಕನೂ ಆಗಿದ್ದ.

 1886ರ ಅನಂತರ ಈತನ ದೃಷ್ಟಿ ಶಾಸನ ಸಂಶೋಧನೆಯ ಕಡೆಗೆ ತಿರುಗಿತು. ಶಾಸನಗಳ ಸಂಶೋಧನೆ ಪ್ರಕಾಶನಗಳಲ್ಲಿ ಬ್ಯೂಲರ್ ಮತ್ತು ಬಸಿರಲ್‍ರ ತರುವಾಯದಲ್ಲಿ ಫ್ಲೀಟ್, ಹುಲ್ಷ್ ಮತ್ತು ಕೀಲ್‍ಹಾರ್ನ್‍ರು ವಿಖ್ಯಾತಪಂಡಿತರೆಂದು ಹೆಸರಾದವರು. ಪ್ರಸಿದ್ಧವಾದ ಐಹೊಳೆಯ 2ನೆಯ ಪುಲಿಕೇಶಿಯ ದಿಗ್ವಿಜಯ ಪ್ರಶಸ್ತಿ ಶಾಸನ, ಕಾಕುತ್ಸ್ಥವರ್ಮನ ಶಾಸನಗಳನ್ನು ಕುರಿತ ಬರಹ, ಶಾಸನಗಳಲ್ಲಿ ಬರುವ ತಿಥಿಗಳ ವಿಮರ್ಶಾತ್ಮಕ ಲೇಖನಗಳು, ಔತ್ತರೇಯ ಮತ್ತು ದಾಕ್ಷಿಣಾತ್ಯ ರಾಜಮನೆತನಗಳ ಕಾಲಾನುಗುಣ ಶಾಸನಗಳ ಯಾದಿಗಳು ಇತರ ಸಂಶೋಧಕರಿಗೆ ಮಾರ್ಗದರ್ಶಕಗಳಾಗಿವೆ. ಎಪಿಗ್ರಾಫಿಯ ಇಂಡಿಕ, ಇಂಡಿಯನ್ ಆಂಟಿಕ್ವೆರಿ ಮೊದಲಾದ ಸಂಶೋಧನ ಪತ್ರಿಕೆಗಳಲ್ಲಿ ಬರೆದ ಈತನ ಲೇಖನಗಳು ಪ್ರಸಿದ್ಧವಾಗಿವೆ. ಎಪಿಗ್ರಾಫಿಯ ಇಂಡಿಕದಲ್ಲಿ ಈತ ಪ್ರಕಟಿಸಿದ ಭಾರತೀಯ ಶಾಸನಗಳ ಸರಣಿ ಗಮನಾರ್ಹವಾದುದು.

 ಐಹೊಳೆ ಮತ್ತು ತಾಳಗುಂದ ಶಾಸನಗಳ ಪಾಂಡಿತ್ಯಪೂರ್ಣ ಉಪೋದ್ಛಾತಗಳಿಂದ ಸಂಸ್ಕøತ ಸಾಹಿತ್ಯ, ವ್ಯಾಕರಣ ಮತ್ತು ಛಂದಃಶಾಸ್ತ್ರಗಳ ಮೇಲೆ ಈತನಿಗಿದ್ದ ಪ್ರಭುತ್ವ ವ್ಯಕ್ತವಾಗುತ್ತದೆ.

 ಕೀಲ್‍ಹಾರ್ನ್‍ಗೆ ಗೌರವದ ಎಲ್‍ಎಲ್.ಡಿ. ಮತ್ತು ವಿಕ್ಟೋರಿಯ ಮಹಾರಾಣಿಯಿಂದ ಸಿ.ಐ.ಇ. ಪ್ರಶಸ್ತಿಗಳೂ ದೊರಕಿದ್ದುವು. ಸಂಸ್ಕøತ ಮತ್ತು ಪ್ರಾಕ್ತನವಿಮರ್ಶನ ಕ್ಷೇತ್ರದಲ್ಲಿ ಈತನ ಹೆಸರು ಅಜರಾಮರವಾದುದು. ಕೀಲ್‍ಹಾರ್ನ್ ತನ್ನ ದೇಶಕ್ಕೆ ಮರಳಿದ ಅನಂತರವೂ ಎಪಿಗ್ರಾಫಿಯ ಇಂಡಿಕಕ್ಕೆ ಅನೇಕ ವಿಮರ್ಶಾತ್ಮಕ ಲೆಖನಗಳನ್ನು ಬರೆದ.

 

(ಪಿ.ಬಿ.ಡಿ.; ಆರ್.ಎಸ್.ಪಿ.; ಬಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ